ಪ್ರಾಮಾಣಿಕತೆ , ನಂಬಿಕೆ , ನಿಷ್ಠೆಯೇ ಜೀವಾಳ
ಜಾತಿ ಸಂಘಟನೆಯ ಉದ್ದೇಶವು ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಔದ್ಯೋಗಿಕ ಸಂಘಟನೆ ಮತ್ತು ಮಾಹಿತಿ ವಿನಿಮಯ, ಸಮಾಜದ ಆಶಕ್ತರಿಗೆ ನೆರವಾಗುವುದು, ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ, ಸಾಧನೆಯ ಹಾದಿಯಲ್ಲಿರುವವರಿಗೆ ಸಹಕಾರ ಮತ್ತು ಮಾರ್ಗದರ್ಶನ ನೀಡುವ ಉದ್ದೇಶ ಹೀಗೆ ಹತ್ತು ಹಲವು ಸಮುದಾಯದ ಅಭಿವೃದ್ಧಿಗೆ ಪೂರಕ ಕೆಲಸಗಳನ್ನು ನಿರ್ವಹಿಸಲು ಸಂಘಟನೆ ಅಗತ್ಯ.
ಸಮಾಜದಲ್ಲಿ ಸಂಘ ಶಕ್ತಿಯೇ ಮುಖ್ಯ, ಸಮಾಜದಲ್ಲಿ ವಿವಿಧ ಜಾತಿ ಮತದವರಿದ್ದಾರೆ, ಎಲ್ಲರೊಂದಿಗೂ ಸೌಹಾರ್ದಯುತವಾಗಿ ಬದುಕುವುದು ತುಂಬಾ ಅವಶ್ಯಕ. ನಮ್ಮ ಸಮಾಜದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಾತಿಗಳಿವೆ, ಕಡಿಮೆ ಸಂಖ್ಯೆ ಹೊಂದಿರುವ ಜಾತಿಗಳು ಇವೆ. ಸಂಖ್ಯಾಬಲ ಕಡಿಮೆ ಹೊಂದಿರುವ ಜಾತಿಗಳು ತಮ್ಮ ಅಸ್ತಿತ್ವಕ್ಕಾಗಿ ಸಂಘಟಿತರಾಗುವುದು ಅನಿವಾರ್ಯ ಈ ಹಿನ್ನೆಲೆಯಲ್ಲಿ ಕೊಠಾರಿ ಸಮಾಜದ ಸಂಘಟನೆಯ ಪರಿಕಲ್ಪನೆ ಮೂಡಿರುವುದು .
1993-94 ಕಾಲಘಟ್ಟ, ಕುಂದಾಪುರದಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ವೀರಪ್ಪ ಮೊಯ್ಲಿಯವರು ಕೊರಗ ಸಮಾಜದ ಸಂಘಟನೆಯನ್ನು ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಉಪಸ್ಥಿತರಿದ್ದ ಶ್ರೀ ಕೆ ನಾಗಪ್ಪ ಕೊಠಾರಿ ಕೆರಾಡಿ ಇವರಿಗೂ ಕೂಡ ನಮ್ಮ ಸಮಾಜದ ಸಂಘಟನೆ ಪರಿಕಲ್ಪನೆ ಮೂಡಿತು.
17-10-1999 ರಂದು ಶ್ರೀ ಕೆ ನಾಗಪ್ಪ ಕೊಠಾರಿ ಕೆರಾಡಿ ಇವರ ಮಾರ್ಗದರ್ಶನದಲ್ಲಿ ಶ್ರೀ ಶಂಕರ ಕೊಠಾರಿ ಯಡ್ತರೆ ಇವರ ಮುಂದಾಳತ್ವದಲ್ಲಿ ಹೋಟೆಲ್ ಶಿವ ಪ್ರಸಾದ್ ಕುಂದಾಪುರದಲ್ಲಿ ಸಭೆ ಸೇರಿ ಸಂಘ ಸ್ಥಾಪನೆಯ ನಿರ್ಣಯ ಕೈಗೊಳ್ಳ ಲಾಯಿತು.
ಈ ಸಭೆಗೆ ಕೆಳಕಂಡ ಮಹನೀಯರ ಉಪಸ್ಥಿತಿ ಇತ್ತು,
21-11-1999 ರಂದು ಕುಂದಾಪುರದ ಹೋಟೆಲ್ ಹರಿಪ್ರಸಾದ್ ಸಭಾಂಗಣದಲ್ಲಿ "ಉಡುಪಿ ಜಿಲ್ಲಾ ಕೊಠಾರಿ ಸೇವಾ ಸಂಘ" ಎಂಬ ಹೆಸರಿನಲ್ಲಿ ಸಂಘದ ಉದ್ಘಾಟನೆಯಾಯಿತು. ಈ ಸಭೆಯ ಅಧ್ಯಕ್ಷತೆಯನ್ನು ಶ್ರೀ ಮಹಾಲಿಂಗ ಕೊಠಾರಿ, ತಲ್ಲೂರು ಇವರು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ದ.ಕ ಕೊಟ್ಟಾರಿ ಸಮಾಜ ಸುಧಾಕರರ ಸಂಘದ ಅಧ್ಯಕ್ಷರಾಗಿದ್ದ ಶ್ರೀ ಪುರುಷೋತ್ತಮ ಕೊಟ್ಟಾರಿಯವರು ಹಾಗು ಸಂಘದ ಪ್ರಮುಖರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಸಂಘದ ಅಧ್ಯಕ್ಷರಾಗಿ ಶ್ರೀ ಕೊರ್ಗು ಕೊಠಾರಿ ಆರ್ಡಿಯವರು ಅವಿರೋಧವಾಗಿ ಆಯ್ಕೆಯಾದರು, ಉಪಾಧ್ಯಕ್ಷರಾಗಿ ಶ್ರೀ ಮಹಾಲಿಂಗ ಕೊಠಾರಿ ತಲ್ಲೂರು, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ರಮಾನಾಥ ಕೊಠಾರಿ ಕೋಟೇಶ್ವರ ಇವರು ಆಯ್ಕೆಗೊಂಡರು.
05-12-1999 ರಂದು ಸಂಘದ ಕಾರ್ಯಕಾರಿ ಸಮಿತಿಯ ಸಭೆ ನಡೆಯಿತು, ಸಂಘದ ತತ್ಕಾಲಿಕ ಕಛೇರಿಯನ್ನು ಶ್ರೀ ಗೋಪಾಲ ಕೊಠಾರಿ ಮೂಡ್ಲಕಟ್ಟೆ ಇವರ ಸಹಕಾರದಿಂದ ಅವರದೇ ಮಾಲೀಕತ್ವದ ಬೆನಕ ಎಂಟರ್ಪ್ರೈಸಸ್ ಕುಂದೇಶ್ವರ ರಸ್ತೆ, ಕುಂದಾಪುರ ಇಲ್ಲಿ ತೆರೆಯಲಾಯಿತು.
06-01-2002 ರಂದು ಸಂಘದ ಕಛೇರಿಯನ್ನು ಬೆನಕ ಎಂಟರ್ಪ್ರೈಸಸ್ ನಿಂದ ಕುಂದಾಪುರದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಕಟ್ಟಡದ ಒಂದು ಕೋಣೆಯನ್ನು ರೂ 500/- ರ ಬಾಡಿಗೆ ಆಧಾರದಲ್ಲಿ ಪಡೆದು ಅಲ್ಲಿಗೆ ಸ್ಥಳಾಂತರಿಸಲಾಯಿತು. ಈ ಬಾಡಿಗೆ ಹಣವನ್ನು ಸಂಘದ ವಿವಿಧ ಪದಾಧಿಕಾರಿಗಳು ಪ್ರತೀ ತಿಂಗಳು ಒಬ್ಬೊಬ್ಬರಂತೆ ಭರಿಸುತ್ತಿದ್ದರು.